ಶ್ರೀಮನ್ಮಹಾಭಾರತದಲ್ಲಿ ಯುದ್ಧದಲ್ಲಿ ಬಸವಳಿದು ಶರಶಯೈಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹ ದೇಹಾಂತ್ಯಕ್ಕಾಗಿ ಉತ್ತರಾಯಣ ಪುಣ್ಯ ಕಾಲವನ್ನು ನಿರೀಕ್ಷಿಸುತ್ತಿರುವಾಗ ಶ್ರೀಕೃಷ್ಣನು ಪಾಂಡವರನ್ನು ಭೀಷ್ಮರಲ್ಲ್ಲಿ ಕರೆತಂದು ಧರ್ಮರಾಯನಿಗೆ ಸಮಸ್ತ ದೋಷ ನಿವಾರಣೆಗೆ ಭೀಷ್ಮರ ಬಾಯಿಯಲ್ಲಿ ನಲೆಸಿ ಭೀಷ್ಮರ ಮೂಲಕ ಬೋಧಿಸಿದ ಶ್ರೇಷ್ಟ ಮಂತ್ರ. ವಿಷ್ಣುಸಹಸ್ರನಾಮ. ಇದರಿಂದ ಪಾಂಡವರು ಪಾಪ ಪರಿಹರಿಸಿಕೊಂಡಿದ್ದು ಇಂದಿಗೂ ಪ್ರಸ್ತುತ. ವಿಷ್ಣುಸಹಸ್ರನಾಮವು ಜಾತಿ, ಲಿಂಗ, ಸಮಯ ಬೇದವಿಲ್ಲದೆ ಎಲ್ಲರೂ ಪಠಿಸಬೇಕಾದ ಶ್ರೇಷ್ಠ ಮಂತ್ರ. ಸಾಮೂಹಿಕವಾಗಿ ಮಾಡಿದ ಪಠಣಕ್ಕೆ ವಿಶೇಷ ಫಲವಿದೆ. ಎಂದು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮೇ.ಮೂ. ವೆಂಕಟರಮಣ ಭಟ್ಟರು ತಿಳಿಸಿದರು.



ಉತ್ತರಾಯಣ ಪರ್ವಕಾಲದ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗ್ರಹಣ ದೋಷ, ಪ್ರಾಕೃತಿಕ ಏರು ಪೇರು, ದೇಶದಲ್ಲ್ಲಿನ ಕ್ಷೆಭೆ, ಪ್ರಜೆಗಳ ಮಾನಸಿಕ, ಶಾರೀರಿಕ ಆರೋಗ್ಯ ಸಮಸ್ಯೆ ಇತ್ಯಾದಿ ದುರಿತಗಳ ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕವಾಗಿ ಶ್ರೀ ವಿಷ್ಣು ಸಹಸ್ರನಾಮ ಪಠಣಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಆ ದಿನ ಬೆಳಗ್ಗೆ ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕ, ಗಣಪತಿ ಹವನ, ಬಳಿಕ ಮಹಾ ಪೂಜೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ಸಂಕಲ್ಪದ ಬಳಿಕ ಮಂಗಳೂರು ರುದ್ರ ಸಮಿತಿಯ ವತಿಯಿಂದ ವಿಶೇಷವಾಗಿ ಶ್ರೀ ರುದ್ರ, ಪುರುಷಸೂಕ್ತ ಪಾರಾಯಣ ಸಹಿತ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಈ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ತಂಡ, ನೋಡು, ಬಿಜೈ, ಶ್ರೀ ವಿಷ್ಣು ಸಹಸ್ರನಾಮ ತಂಡ,ಬಾಂದೊಟ್ಟು, ’ಹವ್ಯಕ ಮಾತೆಯರು’ ತಂಡ, ಶಕ್ತಿನಗರ ಶಾರದಾ ಭಜನಾ ಮಂಡಳಿ, ಮುಂತಾದ ತಂಡಗಳು, ಹಾಗೂ ನೂರಾರು ಭಕ್ತರು ಶ್ರೀ ವಿಷ್ಣುಸಹಸ್ರನಾಮ ಪಠಣದಲ್ಲಿ ಸಾಮೂಹಿಕವಾಗಿ ಭಾಗವಹಿಸಿದರು. ಮಹಾಲಿಂಗೇಶ್ವರ ಭಟ್ ವಿಷ್ಣು ಸಹಸ್ರನಾಮ ಪಠಣ ವಿಧಿ ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಆಡಳಿತಮೊಕ್ತೇಸರರಾದ ಕೆ. ಸಿ, ನಾಕ್, ಸಗುಣಾ ಸಿ. ನಾಕ್ ಶಕ್ತಿ ಶಾಲೆಯ ಪ್ರಧಾನ ಸಲಹೆಗಾರ ರಮೇಶ್, ಕೆ., ಕೆ. ಸಿ. ಪ್ರಭು, ಸುರೇಂದ್ರ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಮಧ್ಯಾಹ್ನ ವಿಶೇಷ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ, ಎಳ್ಳು ಬೆಲ್ಲ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು