ಶ್ರೀರಾಮ ಮಂದಿರ ಶಿಲಾನ್ಯಾಸದ ಸಲುವಾಗಿ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಐತಿಹಾಸಿಕವಾಗಿ ಬಹು ವರ್ಷಗಳಿಂದ ನಿರೀಕ್ಷಿತ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಇದೇ ಆಗಸ್ಟ್ 5 ರಂದು ನಡೆಯಲಿರುವ ಶುಭ ಸಂದರ್ಭದಲ್ಲಿ ಆ ಕಾರ್ಯಕ್ರಮದ ಯಶಸ್ಸಿಗಾಗಿ ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ ದಿನ ಶ್ರೀದೇವರಿಗೆ ವಿಶೇಷ ಪೂಜೆ ನಡೆಸಲು ನಿಶ್ಚಯಿಸಲಾಗಿದೆ.

ಆ ದಿನ ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಮಹಾಗಣಪತಿ ಹವನ ಹಾಗೂ ಮಧ್ಯಾಹ್ನ ವಿಶೇಷ ಕಾರ್ತಿಕ ಪೂಜೆ ನಡೆಸುವುದರ ಮೂಲಕ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ನಿರ್ವಿಘ್ನತೆ, ಕಾರ್ಯಕ್ರಮಕ್ಕೆ ಯಶಸ್ಸು ಹಾಗೂ ಭವ್ಯತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಲು ನಿರ್ಧರಿಸಲಾಗಿದೆ. ಭಗವದ್ಭಕ್ತರು ಸರಕಾರದ ನಿಯಮವನ್ನು ಪಾಲಿಸಿಕೊಂಡು ಸೀಮಿತ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಸ್ತ ಭಾರತಕ್ಕೆ ಹಾಗೂ ಜನರಿಗೆ ಪ್ರಭು ಶ್ರೀರಾಮನ ಪೂರ್ಣಾನುಗ್ರಹವಾಗುವಂತೆ ಪ್ರಾರ್ಥಿಸುವಂತೆ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಗವದ್ಭಕ್ತರು ದೇಣಿಗೆ ನೀಡಲು ಅವಕಾಶವಿದೆ. ಕನಿಷ್ಟ ರೂ. 10 ರಿಂದ ಗರಿಷ್ಠ ಎಷ್ಟೂ ಮೊತ್ತವನ್ನು ನೀಡಿ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.