ಅಷ್ಟಬಂಧ ಬ್ರಹ್ಮಕಲಶೋತ್ಸವ – ಪೂರ್ವತಯಾರಿ ಸಭೆ

ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 2020 ಎಪ್ರಿಲ್ 21 ರಿಂದ 26 ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಎಪ್ರಿಲ್ 29 ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪೂರ್ವತಯಾರಿ ಸಭೆ

ಬ್ರಹ್ಮ ಕಲಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಶ್ರದ್ಧಾ ಭಕ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದುದು ಕರ್ತವ್ಯ – ಮೋನಪ್ಪ ಭಂಡಾರಿ

ಸನಾತನ ಸಂಸ್ಕೃತಿಯ  ಶ್ರದ್ಧಾ ಕೇಂದ್ರಗಳಾದ ದೇವಾಲಯಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಅಲ್ಲಿ ನಡೆಯುವಂತಹ ದೇವತಾ ಕಾರ್ಯಗಳು ಸಮಾಜದ ಹಿತ ದೃಷ್ಟಿಯುಳ್ಳಂತವುಗಳು. ನಮ್ಮೀ ಪ್ರದೇಶ ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ದೇವಾಲಯದ ಬೃಹಕಲಶೋತ್ಸವವು ನಮಗೆಲ್ಲಾ ಹೆಮ್ಮೆ ಹಾಗೂ ಶ್ರೀ ದೇವರಿಗೆ ವಿಶೇಷ ಸೇವೆ ಸಲ್ಲಿಸಲಿಕ್ಕಿರುವ ಸುವರ್ಣಾವಕಾಶ. ಹಾಗಾಗಿ ಪ್ರತಿಯೊಬ್ಬರೂ ತಾವಾಗಿ ಮುಂದೆ ಬಂದು ಜವಾಬ್ದಾರಿಯನ್ನು ವಹಿಕೊಂಡು ಈ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿಯವರು ನುಡಿದರು. ಅವರು ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇದೇ ಬರುವ 2020, ಎಪ್ರಿಲ್ 21 ರಿಂದ 26 ರ ವರೆಗೆ ಜರಗಲಿರುವ ಅಷ್ಟಬಂಧ ಬ್ರಹ್ಮಕಶೋತ್ಸವ ಹಾಗೂ ಎಪ್ರಿಲ್ 29 ರಂದು ಜರಗಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಇದರ ಬಗ್ಗೆ ನಡೆದ ಪೂರ್ವತಯಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಜವಾಬ್ದಾರಿಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ರಚನೆಯಾಗಬೇಕಾಗಿದೆ. ಭಕ್ತರು ಸ್ವತಃ ಮುಂದೆ ಬಂದು ಜವಾಬ್ದಾರಿಯುತವಾಗಿ ತಾವು ಸೇರಬಹುದಾದ ಸಮಿತಿಯಲ್ಲಿ ಸೇರಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಶ್ರೀ ಕ್ಷೇತ್ರದ ಗೌರವ ಸಲಹೆಗಾರರಾದ ಡಾ. ಪಿ. ಅನಂತಕೃಷ್ಣ ಭಟ್ ಮಾತನಾಡಿ ಭಗವದ್ಭಕ್ತರು ತಮ್ಮ ಕರ್ತವ್ಯವೆಂದು ಭಾವಿಸಿ ತಮ್ಮ ತಮ್ಮ ನೈಪುಣ್ಯತೆ, ಸಾಮರ್ಥ್ಯ, ಶಕ್ತಿಯನ್ನು ಸಂಪೂರ್ಣವಾಗಿ ಈ ಕಾರ್ಯಕ್ಕಾಗಿ ಸದುಪಯೋಗಪಡೆಸಬೇಕಾಗಿದೆ ಎಂದರು.

ಇನ್ನೋರ್ವ ಸಲಹೆಗಾರರಾದ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಪರಿಸರದ ಜನರ ಪಾಲ್ಗೊಳ್ಳುವಿಕೆ ಅತೀ ಮುಖ್ಯ. ಈ ಕ್ಷೇತ್ರದ ಬ್ರಹ್ಮಕಲಶ ವಿನೂತನವಾಗಿ, ಸಮಾಜಕ್ಕೆ ವಿಶೇಷ ಸಂದೇಶವನ್ನು ನೀಡಿ ಮಾದರಿಯಾಗಿ ವಿಜೃಂಭಣೆಯಿಂದ ನಡೆಯಬೇಕಾಗಿದೆ ಎಂದರು.

ಆಡಳಿತ ಮೊಕ್ತೇಸರರಾದ ಕೆ. ಸಿ. ನಾೖಕ್‌ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕ್ಷೇತ್ರದ ಹಿನ್ನೆಲೆ ತಿಳಿಸಿ, ಇದು ಈ ಪರಿಸರದ ಭಕ್ತರ ಕ್ಷೇತ್ರ. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸುವ್ಯವಸ್ಥಿತವಾಗಿ ವಿಜೃಂಭಣೆಯಿಂದ ಜರಗಲು ರೂಪುರೇಶೆ, ಕಾರ್ಯಕ್ರಮಗಳ ಸಂಯೋಜನೆ, ಕಾರ್ಯನಿರ್ವಹಣೆ ಇತ್ಯಾದಿ ವಿಚಾರಗಳಲ್ಲಿ ಎಲ್ಲರೂ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ ಎಂದು ವಿನಂತಿಸಿದರು.

ನೆರೆದ ಭಕ್ತರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಈ ಬ್ರಹ್ಮಕಲಶೋತ್ಸವವು ವಿಭಿನ್ನವಾಗಿ ಮೂಡಿ ಬಂದು ಸಮಾಜದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಬೇಕೆಂಬ ಅಭಿಪ್ರಾಯಕ್ಕೆ ಒತ್ತು ನೀಡಲಾಯಿತು. ಯಾವುದೇ ಸಮಿತಿಯಲ್ಲಿ ಜವಾಬ್ದಾರಿಯನ್ನು ನೀಡಿದರೂ ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಳ್ಳುವುದಾಗಿ ಭಕ್ತರು ಒಮ್ಮತದಿಂದ ಭರವಸೆ ನೀಡಿದರು.

ಮೋನಪ್ಪ ಭಂಡಾರಿಯವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಶೀಘ್ರವಾಗಿ ಮುಂದಿನ ಸಭೆ ನಡೆಸುವುದಾಗಿಯೂ ಅದರಲ್ಲಿ ಸಮಿತಿಗಳ ರಚನೆ ಮಾಡುವುದಾಗಿಯೂ ನಿರ್ಣಯಿಸಲಾಯಿತು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಾಲಕೃಷ್ಣ ಭಟ್, ಮೊಕ್ತೇಸರರಾದ ಸುಗುಣಾ ಸಿ. ನಾೖಕ್‌, ಸಹ ಸಂಘಚಾಲಕರಾದ ಸುನಿಲ್ ಆಚಾರ್, ವಿಶ್ವಹಿಂದು ಪರಿಷತ್, ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹೆಚ್. ಕೆ. ಪುರುಷೋತ್ತಮ, ನ್ಯಾಯವಾದಿಗಳಾದ ಪುರುಷೋತ್ತಮ ಭಟ್, ಜಗದೀಶ ಶೇಣವ, ಕಾರ್ಪರೇಟರ್‌ಗಳಾದ ಕಿಶೋರ್ ಕೊಟ್ಟಾರಿ, ಶಕಿಲಾ ಕಾವ, ವನಿತಾ ಪ್ರಸಾದ್, ಬಸ್ತಿ ವಾಮನ ಶೆಣೈ ಅಲ್ಲದೆ ನೂರಾರು ಭಕ್ತರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶ್ರೀ ದೇವರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಭಟ್ಟರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಆಡಳಿತಾಧಿಕಾರಿ ಕೃಷ್ಣ ಕುಮಾರ್ ಸ್ವಾಗತಿಸಿದರು. ಸತ್ಯನಾರಾಯಣ ಭಟ್ರಕೋಡಿ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.