ಆಗಸ್ಟ್ 23-24 ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಲಕ್ಷತುಳಸೀ ಅರ್ಚನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 23-08-2019 ನೇ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿನಾಂಕ 24-9-2019 ನೇ ಶನಿವಾರ ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ಹಾಗೂ ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದಿನಾಂಕ 23-08-2019 ನೇ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಬೆಳಗ್ಗೆ 10 ರಿಂದ ಶ್ರೀ ಶಾರದಾ ಭಜನಾ ಮಂಡಳಿ, ಶಕ್ತಿನಗರ, ಸದ್ಗುರು, ಶ್ರೀಭಾರತೀ ಹವ್ಯಕ ಭಜನಾ ತಂಡ ಮಂಗಳೂರು, ಶ್ರೀ ಜಗನ್ನಾಥ ಶೆಣೈ ಮತ್ತು ಬಳಗ, ಮಂಗಳೂರು ಇವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ವಿಶೇಷ ಮಹಾಪೂಜೆ ನಡೆಯಲಿದೆ. ಸಾಯಂಕಾಲ 4 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಶಕ್ತಿ ವಸತಿಯುತ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತgಣೆ ನಡೆಯಲಿದೆ. ಬಳಿಕ ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ ಅವರಿಂದ ’ಯದಾಯದಾಹಿ ಧರ್ಮಸ್ಯ…’ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ತಿನ ಪಾಂತ ಅಧ್ಯಕ್ಷರಾದ ಪ್ರೊ. ಎಮ್.ಬಿ. ಪುರಾಣಿಕ್, ಗೋ ವನಿತಾಶ್ರಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ಪಿ. ಅನಂತಕೃಷ್ಣ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಮಾಜಿ ಮುಖ್ಯ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್ ಅವರು ಮುಖ್ಯ ಅಭ್ಯಾಗತರಾಗಿರುತ್ತಾರೆ. ’ನೃತ್ಯ ಸೌರಭ’ ಕಾರ್ಯಕ್ರಮದಲ್ಲಿ ಗಾನ ನೃತ್ಯ ಅಕಾಡೆಮಿ, ಕೊಟ್ಟಾರ ಇದರ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆ ಕು. ಮೈತ್ರಿ ವಿಷ್ಣು ಹೆಬ್ಬಾರ್ ಇವರಿಂದ ಶಾಸ್ತ್ರೀಯ ನೃತ್ಯ ನಡೆಯಲಿದೆ. 6.30ರಿಂದ ’ಭಕ್ತಿ ಸೌರಭ’ ಕಾರ್ಯಕ್ರಮದಲ್ಲಿ ಶ್ರೀಮತಿ ಸಂಧ್ಯಾ ಸತ್ಯನಾರಾಯಣ ಇವರ ಶಿಷ್ಯ ವೃಂದದಿಂದ ಶಾಸ್ತ್ರೀಯ ಗಾಯನ ನಡೆಯಲಿದೆ. 7.30ರಿಂದ ನಾಟ್ಯ ವಿದುಷಿ ಶ್ರೀಮತಿ ವಿನುತಾ ಲಕ್ಷ್ಮೀಕಾಂತ ಅವರ ’ನೃತ್ಯಾರಾಧನ’ ತಂಡದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ನಡಯಲಿದೆ. ರಾತ್ರಿ ೯.೦೦ರಿಂದ ಶ್ರೀ ವಾಸುಕಿ ಕೀರ್ತನಾ ತಂಡ, ಶಕ್ತಿನಗರ ಇವರಿಂದ ಭಜನಾ ಸಂಕೀರ್ತನೆ ಇತ್ಯಾದಿ ನಡೆಯಲಿವೆ.

ರಾತ್ರಿ 11.30 ಕ್ಕೆ ಶ್ರೀದೇವರಿಗೆ ವಿಶೇಷ ಅಲಂಕಾರಪೂಜೆ ಹಾಗೂ ಅರ್ಘ್ಯಪ್ರದಾನ ನಡೆಯಲಿದೆ. ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲು ಭಕ್ತರಿಗೆ ಅವಕಾಶವಿದೆ.

ದಿನಾಂಕ 24-08-2019 ನೇ ಶನಿವಾರದಂದು ಬೆಳಗ್ಗೆ 8.30 ರಿಂದ ಲಕ್ಷತುಳಸೀ ಅರ್ಚನೆ ಪ್ರಾರಂಭವಾಗಿ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಿನಾಂಕ ಆಗಸ್ಟ್ 17 ರಂದು ಪೂರ್ವಾಹ್ನ 9.30 ರಿಂದ ಶಕ್ತಿ ವಸತಿ ಶಾಲೆ, ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ಶ್ರೀಕ್ಷೇತ್ರದ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ಶಕ್ತಿ ವಸತಿ ಶಾಲೆಯಲ್ಲಿ ಶ್ರೀಕೃಷ್ಣ ವೇಷ, ಗಾನ ನೃತ್ಯ ಸ್ಪರ್ಧೆ, ಭಗವದ್ಗೀತಾ ಕಂಠಪಾಠ , ಚಿತ್ರಕಲಾ, ಹಾಗೂ ಸಂಸ್ಕೃತ ಶ್ಲೋಕ – ಸಂಭಾಷಣೆ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ. ವಿವರಗಳು ಶಕ್ತಿ ಶಾಲೆಯಲ್ಲಿ ಲಭ್ಯವಿದೆ.

ಈ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ತಮ್ಮ ಮಾಧ್ಯಮದ ಮೂಲಕ ಪ್ರಕಟಿಸಿ ಹೆಚ್ಚಿನ ಸಂಖ್ಯೆಯ ಭಗವದ್ಭಕ್ತರಿಗೆ ತಲಪುವಂತೆ ಮಾಡಿ ಶ್ರೀ ಗೋಪಾಲಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.