ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 15 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ತಾರೀಕು 26-4-2022 ಹಾಗೂ 30-4-2022 ರಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ಶ್ರೀ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ ನಡೆಯಿತು.
26-4-2022 ಶುಕ್ರವಾರದಂದು ಪ್ರಾತಃಕಾಲ 6.12 ಕ್ಕೆ ಸರಿಯಾಗಿ ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರಮಾನಾಥ ಹೆಗ್ಡೆಯವರಿಂದ ದೀಪ ಬೆಳಗಿಸುವುದರ ಮೂಲಕ ಏಕಾಹಭಜನೋತ್ಸವ ಪ್ರಾರಂಭವಾಯಿತು. ಸ್ಥಳೀಯ ಭಜನಾ ಮಂಡಳಿಗಳೊಂದಿಗೆ ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಸೇವೆ ಜರುಗಿತು.
30-04-2022 ರ ಪೂರ್ವಾಹ್ನ 6.12 ರ ಸೂರ್ಯೋದಯಕ್ಕೆ ಭಜನಾ ಮಂಗಳವೂ ನಡೆಯಿತು. ನಂತರ ಅಪಾರ ಭಕ್ತರು ಸಮರ್ಪಿಸಿದ ಸೀಯಾಳವನ್ನು ಕ್ಷೇತ್ರದ ದೇವರಾದ ಮಹಾಗಣಪತಿ ಹಾಗೂ ಗೋಪಾಲಕೃಷ್ಣ ದೇವರಿಗೆ ಅಭಿಷೇಕ ಮಾಡಲಾಯಿತು. ಹನ್ನೆರಡುಕಾಯಿ ಗಣಪತಿ ಹವನ ಪೂರ್ಣಗೊಂಡು ಬೆಳಿಗ್ಗೆ 8 ಕ್ಕೆ ಬೆಳಗ್ಗಿನ ಮಹಾಪೂಜೆ ಜರುಗಿತು. ತದನಂತರ ಮಧ್ಯಾಹ್ನ 11.30 ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ, ನವಕ ಕಲಶಾಭೀಷೇಕ ಜರುಗಿತು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಜರುಗಿತು. ನೆರೆದ ಭಕ್ತಾಧಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 4 ರಿಂದ ಆನಂದ ಭಜನೆ ನಡೆಸಲಾಯಿತು. ಮಂಗಳೂರಿನ ಪ್ರಸಿದ್ಧ ಬಡಗಿನ ಹವ್ಯಾಸಿ ಯಕ್ಷವೃಂದವಾದ ಯಕ್ಷಾಭಿನಯ ಬಳಗ ಮಂಗಳೂರು ಇದರ ಬಾಲಕಲಾವಿದರಾದ ಕು| ಸ್ವಸ್ತೀಶ್ರೀ , ಮಾ| ಆರುಷ್ , ಮಾ| ಆದ್ವಿಕ್ ಅವರಿಂದ “ಶ್ರೀ ಕೃಷ್ಣ ಲೀಲಾಮೃಂತಂ” ಎಂಬ ಯಕ್ಷಗಾನ ನೃತ್ಯ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ 8 ಕ್ಕೆ ಮಹಾಪೂಜೆ ಜರುಗಿ ಮಹಾಸೇವೆ ರಂಗಪೂಜೆ ನೆರವೇರಿಸಿ ಪ್ರಸಾದ ವಿತರಣೆ ನಡೆಯಿತು.
ಕ್ಷೇತ್ರದ ಆಡಳಿತ ಮೋಕ್ತೇಸರಾದ ಡಾ. ಕೆ. ಸಿ. ನಾೖಕ್, ಶ್ರೀಮತಿ ಸಗುಣ ಸಿ. ನಾೖಕ್, ಶ್ರೀ ಸಂಜಿತ್ ನಾೖಕ್ ಉಪಸ್ಥಿತರಿದ್ದರು. ಗಣ್ಯಾತಿಗಣ್ಯರು ಪಾಲ್ಗೊಂಡು ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.