ಸಾಂಕ್ರಾಮಿಕ ಮಹಾಮಾರಿ ರೋಗ, ಕೊರೋನ (ಕೋವಿಡ್ 19)ವು ಸಮಸ್ತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನರು ಜೀವ ಭಯದಲ್ಲಿರುವ ಈ ಸಂಧಿಗ್ದ ಪರಿಸ್ಥಿತಿಯಲಿ. ಎಲ್ಲರೂ ಒಗ್ಗಟ್ಟಿನಿಂದ ಸಾಮೂಹಿಕವಾಗಿ ಶ್ರೀದೇವರ ಮೊರೆಹೋಗಿ ಪ್ರಾರ್ಥಿಸುವುದರಿಂದ ವಿಶೇಷ ಫಲ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತೆಯೇ ಈ ದಿನ, ನಮ್ಮ ವೇದಗಳಲ್ಲಿ ಹೇಳಲ್ಪಟ್ಟ ಕ್ರಿಮಿನಾಶಕ ಸೂಕ್ತ ಹವನವನ್ನು ಶಾಸ್ತ್ರೋಕ್ತವಾಗಿ ನಡೆಸುವುದರಿಂದ ಲೋಕಕ್ಕೆ ಬಂದಂತಹ ರೋಗಉಪಶಮನವಾಗಿ ರೋಗವು ಸಂಪೂರ್ಣ ನಿವಾರಣೆಯಾಗಲಿ. ಜನರಲ್ಲಿ ಶೀಘ್ರವಾಗಿ ಮನಸ್ಸಿಗೆ ನೆಮ್ಮದಿ ಹಾಗೂ ಆರೋಗ್ಯ ನೆಲೆಸುವಂತಾಗಲಿ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪ್ರೊ. ಎಂ. ಬಿ. ಪುರಾಣಿಕ್ ನುಡಿದರು. ಅವರು ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ದಿನಾಂಕ 3-8-2020, ಸೋಮವಾರದಂದು ನಡೆದ ಸಾಮೂಹಿಕ ಆಯುಷ್ಯ ಸೂಕ್ತ ಸಹಿತ ಘರ್ಮ ಪ್ರಾಯಶ್ಚಿತ್ತ ಸೂಕ್ತ (ಕ್ರಿಮಿನಾಶಕ ಸೂಕ್ತ) ಹವನದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಡುತ್ತಾ ನುಡಿದರು.
ನಮ್ಮ ಪರಂಪರೆಯ ಮೂಲವನ್ನು ಮರೆತ ಜೀವನವನ್ನು ನಡೆಸಿದ ಪರಿಣಾಮದಿಂದಾದ ಈ ಮಹಾರೋಗದ ನಿವಾರಣೆಯನ್ನು ವೇದೋಕ್ತವಾದ ಹವನದಿಂದ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಅಗ್ನಿ ರೂಪರಾದ ಋಷಿಮುನಿಗಳ ಕುರಿತಾಗಿ, ಪುರಾತನ ಕಾಲದಲ್ಲಿ ಅದೃಶ್ಯ ಹಾಗೂ ದೃಶ್ಯ ಕ್ರಿಮಿಗಳಿಂದ ಲೊಕದ ಸಮಸ್ತ ಜೀವಿಗಳು ಬಾಧಿಸಲ್ಪಟ್ಟ ಸಂದರ್ಭಗಳಲ್ಲಿ ನಮ್ಮ ವೇದ ಶಾಸ್ತ್ರಗಳಲ್ಲಿ ಹೇಳಲ್ಲಟ್ಟ ಘರ್ಮ ಪ್ರಾಯಶ್ಚಿತ್ತ ಮಂತ್ರ ಪೂರ್ವಕವಾದ ಈ ಹವನದಿಂದ ಎಂತಹ ಕಠಿಣ ರೋಗವೂ ನಿವಾರಣೆಯಾದ ಉದಾಹರಣೆಯಿದೆ. ಇದು ಯಜುರ್ವೇದದ ಆರಣ್ಯಕದಲ್ಲಿ ಚತುರ್ಥ ಪ್ರಶ್ನದಲ್ಲಿ ಬರುವ ಒಂದು ವಿಶೇಷ ಮಂತ್ರ ಪೂರ್ವಕ ಹವನವಾಗಿದೆ. ಶಾಸ್ತ್ರೋಕ್ತವಾಗಿ ಇಂದು ನಡೆಸಿದ ಹವನದಿಂದ ಲೋಕಕ್ಕೇ ಬಂದ ಮಹಾರೋಗ ಶೀಘ್ರವಾಗಿ ನಿವಾರಣೆಯಾಗಿ ’ಸರ್ವೇ ಜನಾಃ ಸುಖಿನೋ ಭವಂತು’ ಎಂಬ ನಮ್ಮ ಪರಂಪರೆಯ ಉಕ್ತಿ ಫಲಿಸಲಿ, ಸಮಸ್ತ ಜನರ ಜೀವನದಲ್ಲಿ ನೆಮ್ಮದಿ ನೆಲೆಸಲಿ ಎಂದು ಪ್ರಧಾನ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಭಟ್ಟರು ಹೋಮದ ಪ್ರಸನ್ನ ಕಾಲದಲ್ಲಿ ಪ್ರಾರ್ಥನೆ ನಡೆಸಿಕೊಡುತ್ತಾ ನುಡಿದರು.
ಬೆಳಗ್ಗೆ ಶ್ರಿದೇವರಿಗೆ ಪಂಚಾಮೃತಾಭಿಷೇಕ, ಗಣಪತಿ ಹವನ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ನಡೆಯಿತು. ಮಂಗಳೂರಿನ ಶ್ರೀರುದ್ರ ಸಮಿತಿಯವರು ಧನ್ವಂತರೀ ಜಪ, ಶ್ರಿ ವಿಷ್ಣು ಸಹಸ್ರನಾಮ, ರುದ್ರ, ಚಮಕ ಪಾರಾಯಣ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಬಿ,ಜೆ.ಪಿ.ಯ ಜಿಲ್ಲಾಧ್ಯಕ್ಷರಾದ ಸುದರ್ಶನ, ಆಡಳಿತ ಮೊಕ್ತೇಸರರಾದ ಡಾ. ಕೆ.ಸಿ. ನಾೖಕ್, ಸ್ಥಳೀಯ ಕಾರ್ಪೊರೇಟರ್‌ಗಳಾದ ವನಿತಾ ಪ್ರಸಾದ್, ಶಕಿಲಾ ಕಾವ, ಕಿಶೊರ್ ಕೊಟ್ಟಾರಿ, ಸುನಿಲ್ ಆಚಾರ್, ಹೆಚ್.ಕೆ. ಪುರುಷೋತ್ತಮ, ಪ್ರದೀಪ್ ಕುಮಾರ್ ಕಲ್ಕೂರ, ಜ್ಯೋತಿಷಿ ಸಿ.ವಿ ಪೊದುವಾಳ್, ಪ್ರಕಾಶ್ ಪಿ, ಎಸ್, ಪ್ರಕಾಶ್ ಇಳಂತಿಲ, ಶಕ್ತಿ ವಿದ್ಯಾ ಸಂಸ್ಥೆಯ ರಮೇಶ್ ಕೆ., ಪ್ರಭಾಕರ್ ಜಿ.ಎಸ್, ವಿದ್ಯಾ ಕಾಮತ್, ಮುಂತಾದವರು ಹಾಗೂ ಸೀಮಿತ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.