ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 26-10-2019, ಶನಿವಾರದಿಂದ 28-10-2019, ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆಗಳಿಂದ ವಿಜೃಂಬಣೆಯಿಂದ ನಡೆಯಿತು. ಜರಗಿತು. ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕಗಳಿಂದ ಪ್ರಾರಂಭಗೊಂಡ ಕಾರ್ಯಕ್ರಮವು ಮಧ್ಯಾಹ್ನ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಸಾಯಂಕಾಲ ಶ್ರೀ ಸದ್ಗುರು ಭಜನಾ ಮಂಡಳಿ, ಪಂಡಿತ್ ಹೌಸ್ ತೊಕ್ಕೊಟ್ಟು ಇವರಿಂದ ಭಜನಾ ಸಂಕೀರ್ತನೆ, ಗುರು ಅರ್ಜುನ್ ಶೆಟ್ಟಿ ಅವರ ಡ್ರಾಗನ್ ಫಿಸ್ಟ್ ತಂಡದಿಂದ ಆತ್ಮ ರಕ್ಷಣೆ ಕರಾಟೆ ಪ್ರದರ್ಶನದೋಂದಿಗೆ ವಿಜೃಂಭಣೆಯಿಂದ ನಡೆಯಿತು. ತಾ. 27, ಅಮಾವಾಸ್ಯೆಯಂದು ಪ್ರಾತಃಕಾಲ ಪವಮಾನ ಅಭಿಷೇಕ, ಸಾಯಂಕಾಲ ಲಕ್ಷ್ಮೀ ಪೂಜೆ, ತಾ. 28, ಪಾಡ್ಯದಂದು ಪ್ರಾತಃಕಾಲ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಿತು. ಎಲ್ಲಾ ದಿವಸಗಳಲ್ಲೂ ಶ್ರೀದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅಲಂಕಾರ ಪೂಜೆ, ಪ್ರತಿ ದಿನ ಸಾಯಂಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು. 27 ರಂದು ಸಾಯಂಕಾಲ ನಾಟ್ಯವಿದುಷಿ ಸುಮಾ ದಾಮೋದರ್, ಮಯೂರಿ ನಾಟ್ಯಾಲಯ ಇವರ ಶಿಷ್ಯ ವೃಂದದಿಂದ ಸಂಗೀತ ನೃತ್ಯ ವೈಭವ, ಭರತ ನಾಟ್ಯ ಕಾರ್ಯಕ್ರಮವು ಜರಗಿತು. 28 ರಂದು ಬೆಳಗ್ಗೆ ಮಂಗಳೂರಿನ ಜಗನ್ನಾಥ ಶೆಣೈ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ, ಸಾಯಂಕಾಲ ಕದ್ರಿಯ ಯಕ್ಷ ಮಂಜೂಷಾ ಮಹಿಳಾ ತಾಳಮದ್ದಳೆ ಬಳಗದವರಿಂದ ’ನರಕಾಸುರ ಮೋಕ್ಷ’- ಯಕ್ಷಗಾನ ತಾಳಮದ್ದಳೆ ಜರಗಿತು.
ಈ ಮೂರೂ ದಿವಸಗಳಲ್ಲಿ ಸಾಯಂಕಾಲ 7 ಕ್ಕೆ ಸಹಸ್ರ ದೀಪಾಲಂಕಾರ ಸಹಿತ ದೀಪಾರಾಧನೆ, ದೀಪೋತ್ಸವ ನಡೆಯಿತು. 28 ರಂದು ಸಾಯಂಕಾಲ ಸಾಮೂಹಿಕ ಗೋಪೂಜೆ ನಡೆಯಿತು. ಹಲವಾರು ಭಗವದ್ಭಕ್ತರು ಇದರಲ್ಲಿ ಭಾಗವಹಿಸಿದರು. ಬಳಕ ಮಹಾಸೇವೆ – ರಂಗಪೂಜೆ, ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ನಡೆಯಿತು.
ಈ ಸಂದರ್ಭದಲ್ಲಿ ಗೋ ವನಿತಾಶ್ರಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಪಿ. ಅನಂತಕೃಷ್ಣ ಭಟ್, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್ ಜಿ.ಎಸ್. ನಿವೃತ್ತ ಪೋಲೀಸ್ ಅಧಿಕಾರಿ ಬಾಲಕೃಷ್ಣ, ಆಡಳಿತ ಮೊಕ್ತೇಸರರಾದ ಕೆ. ಸಿ. ನಾಕ್, ಮೊಕ್ತೇಸರರಾದ ಶ್ರೀಮತಿ ಸಗುಣಾ ನಾಕ್ ಮುಂತಾದವರು ಉಪಸ್ಥಿತರಿದ್ದರು.
ಈ ಎಲ್ಲಾ ದಿವಸಗಳಲ್ಲೂ ಮಧ್ಯಾಹ್ನ ಭಗವದ್ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
28 ರ ಪಾಡ್ಯದಿಂದ ನವೆಂಬರ್ 9 ರ ಉತ್ಥಾನ ದ್ವಾದಶಿ (ತುಳಸೀ ಪೂಜೆ) ವರೆಗೂ ಪ್ರತಿದಿನ ರಾತ್ರಿ 8 ಕ್ಕೆ ಮಹಾಪೂಜೆಯ ಬಳಿಕ ಶ್ರೀದೇವರಿಗೆ ಪ್ರಿಯವಾದ ತುಳಸೀ ನಾಮಸಂಕೀರ್ತನೆ ನಡೆಯಲಿದೆ. ವಿಶೇಷವಾದ ಈ ಸೇವೆ ಮಾಡಿಸಿಕೊಳ್ಳಲು ಭಕ್ತರಿಗೆ ಅವಕಾಶವಿದೆ.
ಈ ಎಲ್ಲಾ ವಿಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ತಲಪುವಂತೆ ಮಾಡಬೇಕಾಗಿ ವಿನಂತಿ.