ಸಹಸ್ರ ದೀಪೋತ್ಸವ

ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 14-11-2020 ಶನಿವಾರದಿಂದ 16-11-2020 ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ವಿಜೃಂಭಣೆಯಿಂದ ಜರಗಿತು. ತಾ. 14 ರಂದು ನರಕ ಚತುರ್ದಶಿ ದಿವಸ ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕ, ತಾ. 15, ಅಮಾವಾಸ್ಯೆಯಂದು ಪ್ರಾತಃಕಾಲ ಪವಮಾನ ಅಭಿಷೇಕ, ಸಾಯಂಕಾಲ ಲಕ್ಷ್ಮೀ ಪೂಜೆ, ತಾ. 16, ಪಾಡ್ಯದಂದು ಪ್ರಾತಃಕಾಲ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಿತು. ಈ ಎಲ್ಲಾ ದಿವಸಗಳಲ್ಲೂ ಶ್ರೀದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅಲಂಕಾರ ಪೂಜೆ ನಡೆಯಿತು. 14 ರಂದು ಸಾಯಂಕಾಲ ಶ್ರೀ ರಘುರಾಮ ಪೈ ಮತ್ತು ಬಳಗ, ಮಂಗಳೂರು, ಶ್ರೀ ಜಗನ್ನಾಥ ಶೆಣೈ ಮತ್ತು ಬಳಗ, ಶಕ್ತಿನಗರ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. 15 ರಂದು ಸಾಯಂಕಾಲ ವಿದುಷಿ ಶ್ರೀಮತಿ ವಿನುತಾ ಲಕ್ಷ್ಮೀಕಾಂತ ಜೋಗಿ ಇವರ ’ನೃತ್ಯಾರಾಧನಾ’ ತಂಡದಿಂದ ಸಂಗೀತ ನೃತ್ಯ ವೈಭವ, ಶಕ್ತಿನಗರದ ವಾಸುಕಿ ಕೀರ್ತನಾತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. 16 ರಂದು ಸಾಯಂಕಾಲ ಶ್ರೀ ರವಿ ಅಲೆವೂರಾಯ ಇವರ ನಿರ್ದೇಶನದಲ್ಲಿ ಸರಯೂ ಯಕ್ಷಬಳಗ, ಕೋಡಿಕಲ್ಲು, ಮಂಗಳೂರು ಇವರಿಂದ ’ಶ್ರೀಕೃಷ್ಣ ಪಾರಮ್ಯ’ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭದಲ್ಲಿ ರವಿ ಅಲೆವೂರಾಯ ಅವರನ್ನೂ ಕಲಾವಿದರನ್ನೂ, ಕಾರ್ಯಕ್ರಮವನ್ನು ಪ್ರಾಯೋಜಿಸಿದ ಪಚ್ಚನಾಡಿ ಪ್ರಮೋದ ರಾವ್ ದಂಪತಿಗಳನ್ನೂ ಸನ್ಮಾನಿಸಲಾಯಿತು.

ಈ ಮೂರೂ ದಿವಸಗಳಲ್ಲಿ ಸಾಯಂಕಾಲ ಸಹಸ್ರ ದೀಪಾಲಂಕಾರ ಸಹಿತ ದೀಪಾರಾಧನೆ, ಸಹಸ್ರ ದೀಪೋತ್ಸವ ನಡೆಯಿತು. ೧೬ರಂದು ಸಾಯಂಕಾಲ ಸಾಮೂಹಿಕ ಗೋಪೂಜೆ, ರಾತ್ರಿ ಮಹಾಸೇವೆ – ರಂಗಪೂಜೆ, ಬಳಿಕ ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ನಡೆಯಿತು.

16 ರ ಪಾಡ್ಯದಿಂದ ನವೆಂಬರ್ 26 ರ ಉತ್ಥಾನ ದ್ವಾದಶಿ (ತುಳಸೀ ಪೂಜೆ) ವರೆಗೂ ಪ್ರತಿದಿನ ರಾತ್ರಿ 8 ಕ್ಕೆ ಮಹಾಪೂಜೆಯ ಬಳಿಕ ಶ್ರೀದೇವರಿಗೆ ಪ್ರಿಯವಾದ ತುಳಸೀ ನಾಮಸಂಕೀರ್ತನೆ ನಡೆಯಲಿದೆ. ವಿಶೇಷವಾದ ಈ ಸೇವೆ ಮಾಡಿಸಿಕೊಳ್ಳಲು ಭಕ್ತರಿಗೆ ಅವಕಾಶವಿದೆ.

’ಪಾರಿಜಾತ’ ಕಲ್ಯಾಣ ಮಂಟಪದ ಉದ್ಘಾಟನೆ

ಶ್ರೀ ಸನ್ನಿಧಿಯಲ್ಲಿ, ಶ್ರೀದೇವರ ಸಮ್ಮುಖದಲ್ಲಿ ಉತ್ತಮವಾದ ಧ್ವನಿ, ಬೆಳಕು ವಿನ್ಯಾಸದಿಂದೊಡಗೂಡಿದ ಸುಸಜ್ಜತವಾದ ನೂತನ ರಂಗಮಂಟಪ ’ಪಾರಿಜಾತ’ವು ಈ ಸಂದರ್ಭದಲ್ಲಿ, ದಿನಾಂಕ 14 ರಂದು ಉದ್ಘಾಟನೆಗೊಂಡಿತು. ಮೊಕ್ತೇಸರರಾದ ಶ್ರೀಮತಿ ಸಗುಣಾ ನಾೖಕ್ ದೀಪ ಬೆಳಗಿಸಿದರು. ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾೖಕ್ ಈ ಸಂದರ್ಭದಲ್ಲಿ ಮಾತನಾಡಿ ದೇವರ ಸಮ್ಮುಖವಿರುವ ಈ ಕಲ್ಯಾಣ ಮಂಟಪವು ಸಮಸ್ತ ಭಕ್ತ ಜನರಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿಯೇ ನಿರ್ಮಾಣವಾಗಿದೆ. ವರ್ಷ ಪೂರ್ತಿ ಇಲ್ಲಿ ಭಜನೆ, ಸಂಗೀತ, ನೃತ್ಯ, ವಾದ್ಯ, ಹರಿಕಥೆ, ಪ್ರವಚನ, ಉಪನ್ಯಾಸಗಳು, ಹೋಮ, ಹವನಗಳು, ಮದುವೆ, ಉಪನಯನ ಇತಾದಿ ಕಾರ್ಯಕ್ರಮಗಳನ್ನು ನಡೆಯುವಂತಾಗಬೇಕು ಎಂದು ನುಡಿದರು, ಈ ಸಂದರ್ಭದಲ್ಲಿ ಮಂಗಳೂರಿನ ಮೋಹನ್ ನಾೖಕ್, ರಘುರಾಮ ಪೈ, ನಾಗೇಶ್ ಪೈ, ಮತ್ತಿತರರು ಉಪಸ್ಥಿತರಿದ್ದರು.