ಲೋಕಕ್ಕೇ ಬಂದಂತಹ ಸಂಕಷ್ಟಗಳನ್ನು ಪರಿಹರಿಸಲು ಭಗವಂತನ ಮೊರೆಹೋಗದೆ ಅನ್ಯ ಮಾರ್ಗವಿಲ್ಲ – ಪ್ರೊ. ಎಮ್. ಬಿ. ಪುರಾಣಿಕ್
ಲೋಕ ಕಲ್ಯಾಣಾರ್ಥವಾಗಿಯೇ ಭಗವಂತನಾದ ಶ್ರೀಕೃಷ್ಣನ ಅವತಾರವಾಗಿದೆ. ಇದೀಗ ಲೋಕದ ಸಮಸ್ತ ಜನರೂ ಸಾಂಕ್ರಾಮಿಕ ರೋಗದಿಂದಾಗಿ ಭಯಭೀತರಾಗಿದ್ದಾರೆ. ಮನುಷ್ಯಮಾತ್ರರಿಂದ ಈ ರೋಗಕ್ಕೆ ಪರಿಣಾಮಕಾರಿ ಔಷಧಿಯನ್ನು ಕಂಡುಹಿಡಿಯಲಾಗಲಿಲ್ಲ. ಈ ಪರಿಸ್ಥಿತಿಯಲಿ ದೇವರ ಮೊರೆಹೋಗದೆ ಬೇರೆ ದಾರಿಯಿಲ್ಲ. ತನ್ನ ಲೀಲೆಯನ್ನೂ ಚಮತ್ಕಾರಗಳನ್ನೂ ಮೆರೆಯುತ್ತಾ ಸಜ್ಜನರನ್ನು ಕಾಪಾಡಿದ ಶ್ರೀಕೃಷ್ಣ ಈಗ ಮತ್ತೊಮ್ಮೆ ನಮ್ಮನ್ನು ಈ ಸಂಕಷ್ಟದಿಂದ ಪಾರುಮಾಡಬೇಕಾಗಿದೆ. ಈ ರೋಗವನ್ನು ಲೋಕದಿಂದಲೇ ನಿವಾರಣೆ ಮಾಡಬೇಕಾಗಿದೆ ಎಂದು ವಿಶ್ವಹಿಂದು ಪರಿಷತ್ತಿ ಪ್ರಮುಖರಾದ ಪ್ರೊ. ಎಮ್. ಬಿ.ಪುರಾಣಿಕ್ ನುಡಿದರು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀದೇವರಿಗೆ ಅರ್ಘ್ಯ ಪ್ರದಾನ ಸೇವೆಯ ಸಂದರ್ಭದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾ ಅವರು ನುಡಿದರು.
ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ಮಾರ್ಗದರ್ಶನದಲ್ಲಿ ದಿನಾಂಕ 11-8-2020 ನೇ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿನಾಂಕ 12-8-2020 ನೇ ಬುಧವಾರ ಲೋಕ ಕಲ್ಯಾಣಾರ್ಥವಾಗಿ ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ನಡೆಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ,.ರಾತ್ರಿ ಶ್ರೀದೇವರಿಗೆ ವಿಶೇಷ ಅಲಂಕಾರಪೂಜೆ ಹಾಗೂ ಅರ್ಘ್ಯಪ್ರದಾನ ಸೇವೆ ನಡೆಯಿತು. ಶಕ್ತಿನಗರದ ಜಗನ್ನಾಥ ಶೆಣೈ ಮತ್ತು ಬಳಗದವರು ಭಜನಾಸಂಕೀರ್ತನೆ ನಡೆಸಿಕೊಟ್ಟರು.
ಮರುದಿನ ಶ್ರೀದೇವರಿಗೆ ಲಕ್ಷತುಳಸೀ ಅರ್ಚನೆ ಹಾಗೂ ವಿಶೇಷ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಯ ರಾಜ್ಯ ವಕ್ತಾರರಾದ ಕ್ಯಾ. ಗಣೇಶ್ ಕಾರ್ಣಿಕ್, ಆಡಳಿತ ಮೊಕ್ತೇಸರರಾದ ಡಾ. ಕೆ.ಸಿ. ನಾೖಕ್ ಮೊಕ್ತೇಸರರಾದ ಶ್ರೀಮತಿ ಸಗುಣಾ ನಾೖಕ್, ಸಂಜಿತ್ ನಾಕ್ ಶಕ್ತಿವಿದ್ಯಾ ಸಂಸ್ಥೆಯ ಪ್ರಮುಖರಾದ ರಮೇಶ್ ಕೆ., ಪ್ರಭಾಕರ್ ಜಿ.ಎಸ್., ಶ್ರೀಮತಿ. ವಿದ್ಯಾ ಕಾಮತ್, ಉದ್ಯಮಿ ಬಸ್ತಿ ದೇವದಾಸ್ ಶೆಣೈ, ಸುಧಾಕರ ರಾವ್ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.